ಅಪ್ರಚಲಿತತೆ
	ಯಾವುದಾದರೂ ಆಸ್ತಿಪಾಸ್ತಿ ಅಥವಾ ಸಿದ್ಧವಸ್ತು ಅನೇಕ ಕಾರಣಗಳಿಂದ ಬಳಕೆ ತಪ್ಪಿ ಹಳತಾಗುತ್ತಿರುವ ಸ್ಥಿತಿ (ಅಬ್ಸೋಲೆಸೆನ್ಸ್). ಉತ್ಪತ್ತಿ ವಿಧಾನದಲ್ಲಿ, ರೀತಿನೀತಿಗಳಲ್ಲಿ ಸಮಯೋಚಿತವಾದ ಸುಧಾರಣೆಯಾಗದಿದ್ದಲ್ಲಿ, ಅದಕ್ಕಿಂತ ಆಕರ್ಷಕವಾದ ಮತ್ತೊಂದು ಪದಾರ್ಥ ಬಳಕೆಗೆ ಬಂದಲ್ಲಿ ಯಾವ ಉದ್ಯಮವಾದರೂ ಹಳತಾಗಿ ಬಳಕೆ ತಪ್ಪುತ್ತದೆ, ಗಿರಾಕಿ ಇಲ್ಲದೇ ಹೋಗುತ್ತದೆ. ಹೀಗೆ ಪ್ರಭಾವ ತಪ್ಪಲು ಆಸ್ತಿ ಕೇವಲ ಹಳೆಯದಾಗಲೇಬೇಕೆಂಬ ನಿಯಮವಿಲ್ಲ. ಕೈಗಾರಿಕೆಗಳ ವಿಷಯದಲ್ಲಂತೂ ಈ ಮಾತು ಸತ್ಯ. ಪದಾರ್ಥದ ಆಕರ್ಷಕತೆ, ಉಪಯೋಗ, ದಾಸ್ತಾನು ಹಾಗೂ ವಿತರಣೆ, ಬೆಲೆ ಪ್ರಚಾರ ಇವುಗಳಿಂದ ಅದು ಬಳಕೆಗೆ ಬಂದು, ಜನಪ್ರಿಯವಾಗಿ, ಪ್ರಚಲಿತವಾಗುತ್ತದೆ. ಪೈಪೋಟಿಯ ಈ ಯುಗದಲ್ಲಿ ಹೊಸದೊಂದು ಸಂಸ್ಥೆ ಅಂಥದೇ ಹೊಸದೊಂದು ಪದಾರ್ಥವನ್ನು ಮಾರಾಟಕ್ಕಿಟ್ಟು ಇನ್ನೂ ಹೆಚ್ಚಿನ ಪ್ರಲೋಭನವನ್ನೊಡ್ಡಿದಾಗ ಹಳೆಯ ವಸ್ತು ಅಪ್ರಚಲಿತವಾಗಬಹುದು. ಒಂದು ವಸ್ತುವಿನ ಅಪ್ರಚಲಿತತೆಗೆ ಗಿರಾಕಿಯ ಅಭಿರುಚಿ, ಮನೋಧರ್ಮಗಳು ಬಹು ಮುಖ್ಯ ಕಾರಣಗಳಾಗಿವೆ. ಸೌಲಭ್ಯ, ಬೆಲೆ, ರಂಜನೆಗಳೇ ಈ ವಿಷಯವನ್ನು ನಿರ್ಧರಿಸುವ ಅಂಶಗಳು. ಆದ್ದರಿಂದ ಉತ್ಪಾದಕರು ನಿರಂತರ ಸಂಶೋಧನೆಯಲ್ಲಿ ತೊಡಗಿ ಗಿರಾಕಿಗಳಿಗೆ ಹೆಚ್ಚು ಹೆಚ್ಚಿನ ಸೌಲಭ್ಯಗಳನ್ನು ಸುಲಭ ಬೆಲೆಗೆ ಒದಗಿಸುವುದರೊಡನೆ ಅವರ ರಸಿಕತೆಗೂ ತುಷ್ಟಿಯನ್ನೊದಗಿಸಬೇಕಾಗುತ್ತದೆ.								
(ವಿ.ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ